ದೇವರಾಜ ಅರಸು, ಡಿ -
1972ರ ಮಾರ್ಚ್ 20 ರಿಂದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ. ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ 1915ರ ಆಗಸ್ಟ್ 20ರಂದು ಜನಿಸಿದರು. ಇವರು ಮೈಸೂರು ವಿಶ್ವವಿದ್ಯಾನಿಲಯದ ವಿe್ಞÁನ ಪದವೀಧರರು. ವಿದ್ಯಾಭ್ಯಾಸ ಮುಗಿದ ಮೇಲೆ ತಮ್ಮ ಹಳ್ಳಿಯಲ್ಲಿ ವ್ಯವಸಾಯದಲ್ಲಿ ನಿರತರಾದರು.

ಜೊತೆಗೆ ಇವರು ರಾಜಕಾರಣದಲ್ಲೂ ಆಸಕ್ತಿ ವಹಿಸಿದರು. ಹಿಂದಿನ ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಯಲ್ಲಿ ಇವರು 1941 ರಿಂದ 1948ರ ವರೆಗೆ ಸದಸ್ಯರಾಗಿದ್ದರು. 1942ರಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧ ಭಾರತಾದ್ಯಂತ ನಡೆದ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದರು. ಭಾರತಕ್ಕೆ ಸ್ವಾತಂತ್ರ್ಯ ದೊರೆತ ಮೇಲೆ 1947ರಲ್ಲಿ ಮೈಸೂರಿನಲ್ಲಿ ಜವಾಬ್ದಾರಿ ಸರ್ಕಾರಕ್ಕಾಗಿ ನಡೆದ ಮೈಸೂರು ಚಲೋ ಹೋರಾಟದಲ್ಲೂ ಭಾಗಿಯಾಗಿದ್ದರು. ಸ್ವತಂತ್ರ ಭಾರತದಲ್ಲಿ ನಡೆದ ಪ್ರಥಮ ಮಹಾ ಚುನಾವಣೆಗಳಲ್ಲಿ (1952) ಹುಣಸೂರು ಕ್ಷೇತ್ರದಿಂದ ರಾಜ್ಯ ವಿಧಾನ ಸಭೆಗೆ ಆಯ್ಕೆ ಹೊಂದಿದರು. ಆಗಿನಿಂದ ಇವರು ವಿಧಾನ ಸಭೆಯ ಸದಸ್ಯರಾಗಿದ್ದಾರೆ. 1956ರಲ್ಲಿ ರಾಜ್ಯ ಪುನರ್ವಿಂಗಡಣೆ ಆದ ಮೇಲೆ ವಿಶಾಲ ಮೈಸೂರಿನ (ಈಗಿನ ಕರ್ನಾಟಕ) ಕಾಂಗ್ರೆಸ್ ಸರ್ಕಾರದಲ್ಲಿ (1962) ಕಾರ್ಮಿಕ, ಸಾರಿಗೆ ಹಾಗೂ ಪ್ರವಾಸೋದ್ಯಮ ಮಂತ್ರಿಯಾಗಿ ಕೆಲಸ ಮಾಡಿದರು. ಅನಂತರ ಪಶು ಸಂಗೋಪನೆ, ವಾರ್ತೆ ಮೀನುಗಾರಿಕೆ ಮತ್ತು ರೇಷ್ಮೆ ಮಂತ್ರಿಯಾಗಿದ್ದರು. 1969ರಲ್ಲಿ ಕಾಂಗ್ರೆಸ್ಸು ಒಡೆದಾಗ ಆಡಳಿತ ಕಾಂಗ್ರೆಸ್ಸಿನ ಸಂಘಟಿತರಾಗಿ ಮುಂದುವರೆದರು. 1970ರಲ್ಲಿ ಇವರು ಆಡಳಿತ ಕಾಂಗ್ರೆಸ್ಸಿನ ರಾಜ್ಯ ಘಟಕದ ಸಂಚಾಲಕರಾಗಿ ಪಕ್ಷ ಸಂಘಟನೆಯ ಹೊಣೆ ವಹಿಸಿದರು. ಅದೇ ವರ್ಷ ಇವರು ಕೇಂದ್ರ ರೇಷ್ಮೆ ಬೋರ್ಡಿನ ಅದ್ಯಕ್ಷರಾದರು.
ಕಾಂಗ್ರೆಸ್ ವಿಭಜನೆಯ ಅನಂತರ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ನಿಲುವಿನ ಬಗ್ಗೆ ರಾಜ್ಯದಲ್ಲಿ ಪ್ರಚಾರದ ಹೊಣೆ ಹೊತ್ತು ಆಡಳಿತ ಪಕ್ಷಕ್ಕೆ ಬೆಂಬಲ ರೂಢಿಸಿದರು. ಜನತೆಯ ಆಶೋತ್ತರಗಳ ಬಗ್ಗೆ ಪರಿಪೂರ್ಣ ಪರಿe್ಞÁನ ಪಡೆದಿರುವ ಅರಸು ಅವರು ತಮ್ಮ ಗುರಿ ಸಾಧನೆಯಲ್ಲಿ ಎದುರಾದ ಎಲ್ಲ ಅಡ್ಡಿ ಆತಂಕಗಳನ್ನೂ ಎದುರಿಸಿದರು. ಆಡಳಿತ ಕಾಂಗ್ರೆಸ್ ಬಲವಾಯಿತು. ವಿಧಾನ ಮಂಡಲದಲ್ಲಿ ಆ ಪಕ್ಷದ ಸದಸ್ಯರ ಸಂಖ್ಯೆ ಬೆಳೆಯಿತು. 1971ರಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ರಾಜ್ಯದ ಎಲ್ಲ 27 ಸ್ಥಾನಗಳೂ ಆಡಳಿತ ಕಾಂಗ್ರೆಸ್ಸಿಗೇ ಬಂದುವು. ಅರಸು ಅವರ ಜನಪ್ರಿಯತೆ ಬೆಳೆಯಿತು. ಅವರ ಸಾಮಥ್ರ್ಯ ಪ್ರಕಾಶಕ್ಕೆ ಬಂತು.

1972ರ ವಿಧಾನಸಭಾ ಚುನಾವಣೆಯಲ್ಲೂ ಆಡಳಿತ ಕಾಂಗ್ರೆಸ್ಸಿಗೆ ಬಲು ಹೆಚ್ಚಿನ ಬಹುಮತ ದೊರೆಯಿತು. ಅವರ ರಾಜಕೀಯ ನಿಪುಣತೆ, ದೂರ ದೃಷ್ಟಿ, ಸಂಘಟನಾ ಶಕ್ತಿಗೆ ಮತ್ತೆ ಯಶಸ್ಸು ದೊರೆಯಿತು. ಅವರು ವಿಧಾನ ಸಭೆಯ ಕಾಂಗ್ರೆಸ್ ಪಕ್ಷದ ನಾಯಕರಾಗಿ ಆಯ್ಕೆ ಹೊಂದಿದರು. ಆ ವರ್ಷದ ಮಾರ್ಚ್ 20ರಂದು ರಾಜ್ಯದ ಮುಖ್ಯ ಮಂತ್ರಿಯಾದರು. ಜೂನ್ 13ರಂದು ಉಪಚುನಾವಣೆಯಲ್ಲಿ ಇವರು ವಿಧಾನಸಭೆಗೆ ಆಯ್ಕೆ ಹೊಂದಿದರು.

ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ರಾಜ್ಯದ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಪ್ರಗತಿಪರ ತಿರುವುಕೊಟ್ಟು ಹೊಸ ಚೈತನ್ಯ ತುಂಬಿ, ರಾಜ್ಯದ ಸಮಗ್ರ ಅಭಿವೃದ್ಧಿಯ ವ್ಯವಸ್ಥೆಯಲ್ಲಿ ಹೊಂದಿಕೊಳ್ಳುವಂತೆ ಇವರು ಆಡಳಿತವನ್ನು ನಿರೂಪಿಸಿದರು. ಇವರು ರಾಜ್ಯಕ್ಕೆ ಸ್ಥಿರ ರಾಜಕೀಯ ನಾಯಕತ್ವ ನೀಡಿ, ಭದ್ರ ಆರ್ಥಿಕ ತಳಹದಿ ಹಾಕಿ, ಸಂರಕ್ಷಿತ ಸಾಮಾಜಿಕ ಚೌಕಟ್ಟು ನಿರ್ಮಿಸುವ ಕಾರ್ಯದಲ್ಲಿ ನಿರತರಾದರು.

ಅತ್ಯಂತ ಪ್ರಗತಿಶೀಲ ಭೂ ಸುಧಾರಣಾ ಶಾಸನ ಇವರ ಸರ್ಕಾರದ ಬಹು ದೊಡ್ಡ ಸಾಧನೆ. ಶತಮಾನಗಳಿಂದ ಬೆಳಕಿಗಾಗಿ ಹಾತೊರೆಯುತ್ತಿರುವ ಹಿಂದುಳಿದವರ ಸಾಮಾಜಿಕ ಆರ್ಥಿಕ ಸುಧಾರಣೆಗಾಗಿ ಹಲವು ಕಾರ್ಯಕ್ರಮಗಳನ್ನು ಇವರು ರೂಪಿಸಿದ್ದಾರೆ. ಈ ಪೈಕಿ ಮುಖ್ಯವಾದ್ದು ಇದಕ್ಕಾಗಿ ನೇಮಕವಾದ ಹಾವನೂರು ಆಯೋಗ. ಆ ಆಯೋಗ ಒಂದು ಗಮನಾರ್ಹ ವರದಿ ನೀಡಿದೆ. 1975ರ ಜುಲೈ 1ರಂದು ಪ್ರಧಾನಿ ಇಂದಿರಾ ಗಾಂಧಿಯವರು ಸಾರಿದ ಇಪ್ಪತ್ತು ಅಂಶಗಳ ಕಾರ್ಯಕ್ರಮದ ಅಡಿಯಲ್ಲಿ ಭೂ ಹಂಚಿಕೆ, ಗ್ರಾಮಾಂತರ ಬಡವರಿಗಾಗಿ ನಿವೇಶನಗಳ ಉಚಿತ ಹಂಚಿಕೆ, ಜನತಾ ವಸತಿ ಯೋಜನೆ, ಸಣ್ಣ ರೈತರ ಅಭಿವೃದ್ಧಿ, ಜೀತಪದ್ಧತಿ ರದ್ದು, ಕಾರ್ಮಿಕರ ಹಿತರಕ್ಷಣೆ ಮುಂತಾದ ಅನೇಕ ಕ್ಷೇತ್ರಗಳಲ್ಲಿ ರಾಜ್ಯದಲ್ಲಿ ಪ್ರಯತ್ನ ನಡೆದಿದೆ.
ಯೋಜನೆ ಮತ್ತು ಪರಿವರ್ತನೆಯ ಬಗ್ಗೆ ಅರಸು ಅವರ ದೃಷ್ಟಿ ಹೀಗೆ: ನೂರು ಅಣೆಕಟ್ಟು ಕಟ್ಟುವುದು, ಹತ್ತು ಕಾರ್ಖಾನೆ ಹಾಕುವುದು ಮಾತ್ರವೇ ಪರಿವರ್ತನೆಯಲ್ಲ. ಕೈಗೊಂಡಿರುವ ಆರ್ಥಿಕ ಹಾಗೂ ಸಾಮಾಜಿಕ ಕ್ರಮಗಳಿಂದ ಮೂಲ ಮೌಲ್ಯಗಳ ಬದಲಾವಣೆ ಆಗುತ್ತದೆ. ಇದು ನಿಜವಾದ ಪರಿವರ್ತನೆ ಎಂದು ಅವರು ಭಾವಿಸಿದ್ದಾರೆ. ಅಣೆಕಟ್ಟುಗಳು, ಕಾರ್ಖಾನೆಗಳು ಪರಿವರ್ತನೆಗೆ ಸಾಧನ. ಅದರ ಪ್ರಾಮುಖ್ಯವನ್ನೂ ಅವರು ಚೆನ್ನಾಗಿ ಅರಿತಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಜಲವಿದ್ಯುತ್ ಯೋಜನೆ, ಕುದುರೆಮುಖ ಅದಿರು ಯೋಜನೆ ಕೃಷ್ಣಾ ಘಟಪ್ರಭಾ ಮಲಪ್ರಭಾ ಕಪಿಲಾ ಹೇಮಾವತಿಗಳಂಥ ನೀರಾವರಿ ಯೋಜನೆಗಳ ಪ್ರಗತಿಗೆ ಬೆಂಬಲ ದೊರೆತಿದೆ.

1956ರಲ್ಲಿ ಭೌಗೋಳಿಕವಾಗಿ ಕರ್ನಾಟಕ ಏಕೀಕರಣ ಆಯಿತಾದರೂ ಅದು ಮಾನಸಿಕವಾಗಿ ಪರಿಪೂರ್ಣವಾಗಿರಲಿಲ್ಲ. ದೇವರಾಜ ಅರಸು ಅವರು ಅದನ್ನು ಸಾಧಿಸಿದರು. ರಾಜ್ಯಕ್ಕೆ ಕರ್ನಾಟಕವೆಂದು ಪುನರ್‍ನಾಮಕರಣ ಮಾಡಿದ್ದು ಈ ನಿಟ್ಟಿನಲ್ಲಿ ಇವರ ದೊಡ್ಡ ಸಾಧನೆ, ಇಂಥ ಸೂಚನೆಯನ್ನು ಹಿಂದೆ ಇವರೇ ವಿರೋಧಿಸಿದ್ದರಾದರೂ, ಬದಲಾದ ಪರಿಸ್ಥಿತಿಯಲ್ಲಿ ಇದರ ಪ್ರಾಮುಖ್ಯವನ್ನು ಇವರು ಅರಿತುಕೊಂಡರು. ಜನತೆಯ ಮನೋಗತವನ್ನು ಅರ್ಥ ಮಾಡಿಕೊಂಡರು. ಇದು ರಾಜಕಾರಣದಲ್ಲಿ ಇವರ ವಿವೇಕಕ್ಕೆ ಸಾಕ್ಷಿಯಾಗಿದೆ.

ಮೇಲ್ನೋಟಕ್ಕೆ ಇವರು ತುಸು ಒರಟು ಎನಿಸಿದರೂ ಇವರು ನೇರ, ಸರಳ, ನಿರ್ದಾಕ್ಷಿಣ್ಯಪರ. ನಿರ್ಭೀತ ಪ್ರಾಮಾಣಿಕತೆ ಇವರ ಮುಖ್ಯ ಗುಣ. ಇವರು ಆಡುವುದು ಶ್ರೀಮಂತರ ಭಾಷೆಯಲ್ಲ, ಶ್ರೀ ಸಾಮಾನ್ಯನ ಭಾಷೆ. ಅವರ ಒಳಿತಿನ ಬಗ್ಗೆ ಇವರಿಗೆ ವಿಶೇಷ ಕಾಳಜಿ. ಜೊತೆಯವರಿಗೆಲ್ಲ ಚೈತನ್ಯ ತುಂಬುವ, ದೃಢ ಆತ್ಮವಿಶ್ವಾಸದಿಂದ ಕೂಡಿದ ರಚನಾತ್ಮಕ ಆಶಾವಾದ ಇವರದು.

ರಾಜಕಾರಣಲ್ಲಿ ಇವರು ತಾವು ನಂಬಿದ್ದನ್ನು ನಡೆಸಲು ಪಟ್ಟು ಹಿಡಿಯಬಲ್ಲರು ಕುಸ್ತಿಯ ತರಬೇತು ಹೊಂದಿ ದೈಹಿಕವಾಗಿ ದೃಢವಾಗಿರುವ ಅರಸು ಅವರು ಕರ್ನಾಟಕದ ರಾಜಕಾರಣದಲ್ಲೂ ಈ ಗುಣವನ್ನು ಪ್ರಕಟ ಪಡಿಸಿದ್ದಾರೆ. ಕಷ್ಟಗಳಿಗೆ ತಲೆಬಾಗುವುದು ಇವರ ಜಾಯಮಾನವಲ್ಲ. ಪರಿವರ್ತನೆಯ ಸಮಾಜದಲ್ಲಿ ಕಷ್ಟ ಹಿಂಸೆಗಳು ಅನಿವಾರ್ಯ ಕ್ರಿಯೆಗಳು, ಅವನ್ನು ಎದುರಿಸಲೇಬೇಕು ಎನ್ನುವುದು ಇವರ ನಿಲುವು.

ಇವರದು ಸಂತೃಪ್ತ ಸಂಸಾರ. ದೇವರಾಜ ಅರಸು ಅವರ ಪತ್ನಿ ಚಿಕ್ಕಮ್ಮಣ್ಣಿಯವರು ಇವರಿಗೆ ಮೂವರು ಪುತ್ರಿಯರು. 
(ಕೆ.ಜೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ